ಹೈಸ್ಕೂಲ್ ಪ್ರೇಮದ ಗಂಟು ಮೂಟೆ

Picture of Cinibuzz

Cinibuzz

Bureau Report

ಅದೊಂದು ಕಾಲವಿತ್ತು, ಬೆಳ್ಳಿತೆರೆಯ ಮೇಲೆ ನಡೆಯುವುದೆಲ್ಲ  ನಿಜ, ಸಿನಿಮಾದ  ಹಾಗೆಯೇ ನಮ್ಮ ಜೀವನದಲ್ಲಿ ನಡೆಯುತ್ತೆ   ಎಂದು 80-90 ದಶಕದಲ್ಲಿ ಹರೆಯದ ಯುವಕ, ಯುವತಿಯರು  ಭಾವಿಸುತ್ತಿದ್ದರು. ಆಗ ಸಿನಿಮಾ ಜನರ ಮೇಲೆ ತೀವ್ರ ಪರಿಣಾಮ ಬೀರುತ್ತಿತ್ತು. ತೆರೆಯ ಮೇಲೆ ಬರುವ ಪಾತ್ರ, ದೃಶ್ಯಗಳು ನಿಜ ಎನ್ನುವ ಭ್ರಮೆ ಸಾಕಷ್ಟು ಜನರಲ್ಲಿತ್ತು. ಕೆಲವೊಂದು  ಚಿತ್ರಗಳು ಸಮಾಜವನ್ನೇ ಬದಲಿಸಿದ ಉದಾಹರಣೆಗಳೂ ಇದೆ.

ಅದೇ ರೀತಿ  ಯಾವುದೇ ಸ್ವಂತ ನಿರ್ಧಾರವನ್ನು  ಕೈಗೊಳ್ಳಲಾಗದ 16-17ರ ವಯೋಮಾನದ  ಹುಡುಗಿಯೊಬ್ಬಳ ಕಥೆ  ಗಂಟು ಮೂಟೆ.  ಚಿತ್ರಗಳಲ್ಲಿ  ಜರುಗುವ  ರೀತಿಯೇ  ನನ್ನ ಜೀವನದಲ್ಲೂ  ನಡೆಯುತ್ತೆ  ಎಂದು ಭ್ರಮಿಸೋ ಹರೆಯದ ಹುಡುಗಿ ಮೀರಾಳ  ಕಥೆಯನ್ನು  ನಿರ್ದೇಶಕಿ ರೂಪಾರಾವ್ ಅವರು  ಈ ಚಿತ್ರದಲ್ಲಿ   ನಿರೂಪಿಸುವ  ಪ್ರಯತ್ನ ಮಾಡಿದ್ದಾರೆ.  ಆಗ ತಾನೇ ಹರೆಯದ ಹೊಸ್ತಿಲಲ್ಲಿ ನಿಂತಿರುವ ಹೈಸ್ಕೂಲ್ ಹುಡುಗಿಯೊಬ್ಬಳ ಮನದಲ್ಲಿ ಏನೇನಲ್ಲ ಆಸೆಗಳು, ಮನೋಕಾಮನೆಗಳು  ಹುದುಗಿರುತ್ತವೆ ಎಂಬುದನ್ನು ತೆರೆಯ ಮೇಲೆ ತೋರಿಸಲು ನಿರ್ದೇಶಕಿ ರೂಪಾರಾವ್ ಟ್ರೈ ಮಾಡಿದ್ದಾರೆ. ಈ ಚಿತ್ರದಲ್ಲಿ ಪ್ರಕಾಶ ಬೆಳವಾಡಿ ಅವರ ಪುತ್ರಿ ತೇಜು ಬೆಳವಾಡಿ ಹಾಗೂ ನಿಶ್ಚಿತ ಕೊರೋಡಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರ ಇತ್ತೀಚೆಗ ನ್ಯೂಯಾರ್ಕ್‌ನಲ್ಲಿ  ನಡೆದ ಇಂಡಿಯನ್ ಫಿಲಂ ಫೆಸ್ಟಿವಲ್‌ನಲ್ಲಿ ಭಾಗವಹಿಸಿ ಬೆಸ್ಟ್  ಸ್ಕ್ರೀನ್ ಪ್ಲೇ  ಪ್ರಶಸ್ತಿಯನ್ನು ಕೂಡ ಗಳಿಸಿಕೊಂಡಿದೆ.

ರೂಪಾರಾವ್ ಮೂಲತ: ಐಟಿ ಬ್ಯಾಕ್‌ಗ್ರೌಂಡ್‌ನಿಂದ ಬಂದವರು. ಹಲವಾರು ಕಿರುಚಿತ್ರಗಳನ್ನು ಹಾಗೂ ವೆಬ್ ಸಿರೀಸ್‌ಗಳನ್ನು ನಿರ್ದೇಶಿಸಿರುವ ರೂಪಾರಾವ್,  ತಾನು ಕೆಲಸ ಮಾಡುತ್ತಿದ್ದ  ಐಟಿ ಉದ್ಯೋಗವನ್ನು ಸಿನಿಮಾ ಮಾಡುವ ಫ್ಯಾಷನ್‌ಗಾಗಿ  ತ್ಯಜಿಸಿ ಬಂದಿದ್ದಾರೆ. ಅಮೆಯುಕ್ತಿ ಸ್ಟುಡಿಯೋಸ್ ಮೂಲಕ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಛಾಯಾಗ್ರಾಹಕ ಹಾಗೂ ನಿರ್ದೇಶಕರೂ ಅದ ಸಹದೇವ್ ಕೂಡ ಇದರಲ್ಲಿ ಪಾಲುದಾರರು. ನಿರ್ದೇಶಕಿ ರೂಪಾರಾವ್ ಒಬ್ಬ ಹೈಸ್ಕೂಲ್ ಹುಡುಗಿಯ ದೃಷ್ಟಿಕೋನದಲ್ಲಿ  ಇಡೀ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.

ಇತ್ತೀಚೆಗೆ  ಈ ಚಿತ್ರದ ಟ್ರೇಲರ್ ಪ್ರದರ್ಶನ ಹಾಗೂ ಪತ್ರಿಕಾಗೋಷ್ಟಿ  ನಡೆಯಿತು. ನಾಯಕಿ ತೇಜು ಬೆಳವಾಡಿ ಮಾತನಾಡುತ್ತ ಗಂಟು ಮೂಟೆ ನನಗೆ ಪ್ರಥಮ ಚಿತ್ರ. ರೂಪಾರಾವ್  ಅವರು ಒಂದು ನಾಟಕದಲ್ಲಿ  ನನ್ನ ಅಭಿನಯ ನೋಡಿ ನನ್ನನ್ನು ಕರೆಸಿಕೊಂಡು  ಈ ಕಥೆ ಹೇಳಿದರು. ಕಥೆ ಕೇಳಿದ ನಾನು ಆಗಲೇ ಫ್ಲಾಟ್ ಆದೆ. ನಾನು ಫಸ್ಟ್ ಟೈಂ ನನ್ನ ಅಪ್ಪನಿಗೆ ಹೇಳದೆ ಈ ಪಾತ್ರವನ್ನು ಒಪ್ಪಿದ್ದೆ. ಕೊನೆಗೆ ಅವರೇ ಗ್ರೀನ್ ಸಿಗ್ನಲ್ ಕೊಟ್ಟರು. ಒಂದು ಕಿಸ್ ಕೊಟ್ಟರೆ ಮಕ್ಕಳಾಗಿ ಬಿಡುತ್ತೇನೋ ಎಂದುಕೊಳ್ಳುವ  ಮುಗ್ಧ ಹುಡುಗಿಯ ಚಿತ್ರಣ ಈ ಸಿನಿಮಾದಲ್ಲಿದೆ ಎಂದು ಹೇಳಿದರು. ಚಿತ್ರದಲ್ಲಿ   ಈಕೆಯ ಸಹಪಾಠಿಯಾಗಿ ನಟಿಸಿರುವ ನಿಶ್ಚಿತ್  ಕೊರೋಡಿ ಮಾತನಾಡುತ್ತ, ನಾನು ಟೆಂಟ್ ಸಿನಿಮಾದಲ್ಲಿ ಕೋರ್ಸ್ ಕಲಿಯುವಾಗ ರೂಪಾರಾವ್ ಅಲ್ಲಿ ಟೀಚರ್ ಆಗಿದ್ದರು. ಮುಂದೆ ನಾನು ತೆಲುಗು ಚಿತ್ರದಲ್ಲಿ  ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದ್ದೆ, ನಂತರ  ಈ ಚಿತ್ರದಲ್ಲಿ ಅವಕಾಶ ದೊರೆಯಿತು. ನನ್ನದು 10ನೇ ಕ್ಲಾಸ್ ಹುಡುಗನ ಪಾತ್ರ. ಹತ್ತು ಬಾರಿ ಆಡಿಷನ್ ಆದ ನಂತರ ನನಗೆ  ಈ ರೋಲ್ ಸಿಕ್ಕಿತು ಎಂದು ಹೇಳಿದರು.

ನಿರ್ದೇಶಕಿ ರೂಪಾರಾವ್ ಮಾತನಾಡಿ  ಇದು ಹೈಸ್ಕೂಲ್  ಕಥೆ. ಹೀರೋ ಸಲ್ಮಾನ್ ಖಾನ್ ಥರ ಕಾಣಬೇಕು ಎಂದು ನಿಶ್ಚಿತ್‌ಗೆ ಮೊದಲೇ ಪ್ರಿಪೇರ್ ಮಾಡಿದ್ದೆ. ನಾನು ಯುವತಿಯೋರ್ವಳ ದೃಷ್ಟಿಕೋನದಲ್ಲಿ ಈ ಸ್ಕ್ರಿಪ್ಟ್  ಮಾಡಿದೆ. 90 ಪರ್ಸೆಂಟ್ ತೇಜು ಮೇಲೆ ಈ ಸಿನಿಮಾ ಸಾಗುತ್ತದೆ. ಒಂದು ಏಜ್‌ನಲ್ಲಿ ಸಿನಿಮಾನೇ ಬೇರೆ, ನಿಜ ಜೀವನವೇ ಬೇರೆ ಅಂತ ಗೊತ್ತಾಗುವವರೆಗೆ ಆಕೆಯ ಲೈಫ್ ಜರ್ನಿ ಸಾಗುತ್ತದೆ.  18 ರಿಂದ 20 ದಿನಗಳ ಕಾಲ ಜಯನಗರದ ಒಂದು ಸ್ಕೂಲ್‌ನಲ್ಲಿ ಈ ಚಿತ್ರಕ್ಕೆ  ಶೂಟ್ ಮಾಡಿ, ನಂತರ  ಮೈಸೂರಿನಲ್ಲಿ ಔಟ್‌ಡೋರ್ ಶೂಟಿಂಗ್ ನಡೆಸಿದ್ದೇವೆ. 1980-90ರ ಕಾಲದಲ್ಲಿ ನಡೆವ ಕಥೆಯಿದು ಎಂದು ಹೇಳಿದರು.

ಇನ್ನಷ್ಟು ಓದಿರಿ

Scroll to Top