ಈ ಹಿಂದೆ ಡಬ್ಬಿಂಗ್ ಬೇಡ ಎಂದು ಒಕ್ಕೊರಲಿನಿಂದ ಧ್ವನಿ ಎತ್ತಿದ ಚಂದನ ವನದ ತಾರೆಗಳು ಯಾವಾಗ ಕನ್ನಡ ಚಿತ್ರಗಳು ಬೇರೆ ಭಾಷೆಗಳಿಗೆ ಡಬ್ ಆಗಿ ಕಮಾಯಿ ಮಾಡಲು ಶುರುಮಾಡಿತೋ ಆಗ ತೆಪ್ಪಗಾಗಿಬಿಟ್ಟರು. ಅದೇ ರೀತಿ ಕರ್ನಾಟಕದಲ್ಲೂ ಡಬ್ಬಿಂಗ್ ಸಿನಿಮಾಗಳಿಗೆ ಮುಕ್ತ ಮಾರುಕಟ್ಟೆಯೂ ಕ್ರಿಯೇಟ್ ಆಗಿಹೋಯಿತು. ಆದರೆ ಡಬ್ಬಿಂಗ್ ಆದ ಸಿನಿಮಾಗಳು ಗೆದ್ದದ್ದು ಸೋತದ್ದು ಬೇರೆ ವಿಚಾರ.
ಕೇವಲ ಕಣ್ಣೊಡೆಯುವ ಮೂಲಕವೇ ರಾತ್ರೋ ರಾತ್ರಿ ಇಂಟರ್ ನ್ಯಾಷನಲ್ ಕ್ರಶ್ ಪಟ್ಟ ಪಡೆದ ಪ್ರಿಯಾ ವಾರಿಯರ್ ನಟಿಸಿದ್ದ ಓರು ಆಡಾರ್ ಲವ್ ಸಿನಿಮಾ ಕೂಡಾ ಕನ್ನಡಕ್ಕೆ ಡಬ್ ಆಗಿತ್ತು. ಆದರೆ ತೆಲುಗು ರಂಗದ ಯಾವೊಂದು ಸಿನಿಮಾಗಳು ಕನ್ನಡಕ್ಕೆ ಡಬ್ ಆಗಿರಲಿಲ್ಲ. ಸದ್ಯ ಆ ಅಪವಾದವೂ ದೂರಾಗಿದ್ದು, ರಾಮ್ ಚರಣ್ ತೇಜ್ ನಟನೆಯ ರಂಗಸ್ಥಲಂ ಚಿತ್ರ ಕನ್ನಡಕ್ಕೆ ರಂಗ ಸ್ಥಳವಾಗಿ ಡಬ್ ಆಗಿ ರಿಲೀಸ್ ಗೆ ರೆಡಿಯಾಗಿದೆ. ಅಲ್ಲದೇ ಜುಲೈ 12ರಂದು ಅದ್ದೂರಿಯಾಗಿ ‘ರಂಗಸ್ಥಲಂ’ನ ಕನ್ನಡ ವರ್ಷನ್ ರಿಲೀಸ್ ಆಗಲಿದೆ. ರಂಗಸ್ಥಲಂ ನ ಕನ್ನಡ ಅವತರಣಿಕೆಯ ಹಾಡುಗಳು ಕೇಳುಗರ ಮನಮುಟ್ಟುವಂತೆ ಮಾಡಿದ್ದು, ಬಹಳಷ್ಟು ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಈ ಚಿತ್ರವನ್ನು ಸುಕುಮಾರ್ ನಿರ್ದೇಶನ ಮಾಡಿದ್ದು, 2018ರಲ್ಲಿ ರಿಲೀಸ್ ಭಾಗ್ಯ ಕಂಡು 60 ಕೋಟಿ ಬಂಡವಾಳಕ್ಕೆ ಬರೋಬ್ಬರಿ ನಾಲ್ಕು ಪಟ್ಟು ಲಾಭವನ್ನುಮಾಡಿತ್ತು. ಕರ್ನಾಟಕದಲ್ಲೂ ಉತ್ತಮ ಗಳಿಕೆಯನ್ನು ಗಳಿಸಿತು. ಇದು ರಾಮ್ ಚರಣ್, ಸಮಂತಾ, ಜಗಪತಿ ಬಾಬು ಮುಂತಾದವರಿಗೆ ಕಮ್ ಬ್ಯಾಕ್ ಸಿನಿಮಾ ಕೂಡ ಆಗಿತ್ತು. ಇದೀಗ ಮತ್ತೊಮ್ಮೆ ಕನ್ನಡ ವರ್ಷನ್ನಲ್ಲಿ ‘ರಂಗಸ್ಥಲಂ’ ಕರ್ನಾಟಕದಲ್ಲಿ ಬಿಡುಗಡೆ ಆಗಲಿದ್ದು, ಜೆ ಮೂವೀಸ್ ಬ್ಯಾನರ್ನಡಿಯಲ್ಲಿ ರಾಜ್ಯಾದ್ಯಂತ ವಿತರಣೆ ಆಗುತ್ತಿದೆ. ಮೈತ್ರಿ ಮೂವೀ ಮೇಕರ್ಸ್ ಸಂಸ್ಥೆ ಬಂಡವಾಳ ಹೂಡಿದ್ದು, ದೇವಿ ಶ್ರೀಪ್ರಸಾದ್ ಸಂಗೀತ ಸಂಯೋಜನೆ ಮಾಡಿದ್ದಾರೆ.











































