ಕೆಜಿಎಫ್ ಮೂಲಕ ಭಾರತದಾದ್ಯಂತ ಮದರ್ ಸೆಂಟಿಮೆಂಟ್ ಹರಡಿಸಿದ್ದ ನಟಿ ಅರ್ಚನಾ ಜೋಯಿಸ್. ಕೆಜಿಎಫ್ ಚಿತ್ರಕ್ಕೂ ಮುನ್ನ ಅಷ್ಟೇನೂ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದ ಅರ್ಚನಾಗೆ ಕೆಜಿಎಫ್ ನಂತರ ಬಹಳಷ್ಟು ಆಫರ್ ಗಳು ಬರುತ್ತಲಿದೆ. ಅಲ್ಲದೇ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿಯೂ ಅಭಿನಯಿಸುತ್ತಿದ್ದಾರೆ. ಸದ್ಯ ಅವರ ಕಾಲಾಂತರ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಶುರುವಾಗಿದ್ದರೆ, ನಕ್ಷ ಚಿತ್ರದ ಶೂಟಿಂಗ್ ಸರಾಗವಾಗಿ ಸಾಗುತ್ತಿದೆ. ಇದರ ಜತೆಗೆ ಅರ್ಚನಾ ಮುಂದ್ ಒಂದ್ ದಿನ ಚಿತ್ರದಲ್ಲಿಯೂ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಜೂನ್ 23ರಂದು ಮುಹೂರ್ತ ಆಚರಿಸಿಕೊಂಡು ಈಗಾಗಲೇ ಶೂಟಿಂಗ್ ಶುರು ಮಾಡಿಕೊಂಡಿದೆ.

ಹದಿನಾಲ್ಕು ಪಾತ್ರಗಳ ಸುತ್ತಲೂ ಚಿತ್ರದ ಕಥೆ ಸಾಗಲಿದ್ದು, ಅರ್ಚನಾ ಮೇಕಪ್ ಇಲ್ಲದೆಯೇ ನೈಜತೆಗೆ ಒತ್ತು ಕೊಟ್ಟು ನ್ಯಾಚುರಲ್ ಆಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ವಯಸ್ಸಾದ ಅಪ್ಪ-ಅಮ್ಮನನ್ನು ಮಕ್ಕಳು ನೋಡಿಕೊಳ್ಳದಿದ್ದರೆ, ಮುಂದ್ ಒಂದ್ ದಿನ ಏನಾಗುತ್ತದೆ ಎಂಬುದನ್ನೇ ಇಲ್ಲಿ ಭಾವನಾತ್ಮಕವಾಗಿ ಹೇಳುವ ಪ್ರಯತ್ನವನ್ನು ಮಾಡಲಾಗುತ್ತಿದೆ. ಚಿತ್ರದಲ್ಲಿ ಅರ್ಚನಾರಿಗೆ ಎರಡು ಶೇಡಿನ ಪಾತ್ರವಿದ್ದು, ಒಂದರಲ್ಲಿ ಚಿಕ್ಕ ವಯಸ್ಸಿನ ಯುವತಿಯಾಗಿ, ಮತ್ತೊಂದರಲ್ಲಿ ವಯಸ್ಸಾದ ಮಹಿಳೆಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮುಂದೊಂದ್ ದಿನ ಚಿತ್ರವನ್ನು ರಂಗಭೂಮಿ ಹಿನ್ನೆಲೆಯ ನವೀನ್ ಶಕ್ತಿ ನಿರ್ದೇಶನ ಮಾಡುತ್ತಿದ್ದು, ಕೆ.ಕಲ್ಯಾಣ್, ನಾಗೇಂದ್ರ ಪ್ರಸಾದ್, ಯೋಗರಾಜ್ ಭಟ್ ಗೀತ ಸಾಹಿತ್ಯವನ್ನು ಬರೆದಿದ್ದಾರೆ. ವಿನು ಮನಸು ಸಂಗೀತ ಸಂಯೋಜನೆಯನ್ನು ಮಾಡುತ್ತಿದ್ದಾರೆ. ವಿಶೇಷವೆಂದರೆ ಚಿತ್ರಕ್ಕೆ ಕೆ.ಎ.ಎಸ್. ನಿವೃತ್ತ ಅಧಿಕಾರಿ ಬಿಳಿದಾಳ ಕೆಂಪಯ್ಯ ಸಂಭಾಷಣೆ ಬರೆಯುತ್ತಿದ್ದಾರೆ.











































