ತಾನು ಬೆಳೆಯುವ ಜತೆಗೆ ತನ್ನವರನ್ನು ಬೆಳೆಸುವ ದೊಡ್ಡ ಗುಣ ದೊಡ್ಡತನವಿರುವವರಿಗೆ ಬರುವಂತದ್ದು. ಸ್ಯಾಂಡಲ್ ವುಡ್ ನಲ್ಲಿ ಅಂತಹ ಸತ್ಕಾರ್ಯವನ್ನು ಆರಂಭದಿಂದಲೂ ಮಾಡುತ್ತಾ ಬರುತ್ತಿರುವ ಹೃದಯವಂತ ಚಾಲೆಂಜಿಂಗ್ ಸ್ಟಾರ್ ದರ್ಶನ್.
ತನ್ನವರ ಜತೆಗೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಪಡೆಯುವ ಹೊಸಬರಿಗೂ ತನ್ನ ಕೈಲಾದ ಮಟ್ಟಿಗೆ ಸಾಥ್ ಕೊಡುತ್ತಾ ಬಂದಿದ್ದಾರೆ. ಇದುವರೆಗೂ ಅದೆಷ್ಟೋ ಹೊಸಬರು ಅವರ ಸಹಾಯದಿಂದಲೇ ನಿಟ್ಟುಸಿರು ಬಿಟ್ಟಿದ್ದಾರೆ. ಗೆದ್ದು ದಡ ಸೇರಿದ್ದಾರೆ.
ಸದ್ಯ ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ತಾ ಆಗಸ್ಟ್ ಇಪ್ಪತ್ಮೂರರಂದು ಬಿಡುಗಡೆಗೆ ರೆಡಿಯಾಗಿರೋ ನನ್ನಪ್ರಕಾರ ಚಿತ್ರದ ಟ್ರೇಲರನ್ನು ದರ್ಶನ್ ಕೊಟ್ಟ ಮಾತಿನಂತೆ ಬಿಡುಗಡೆಗೊಳಿಸಿದ್ದಾರೆ. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ನನ್ನ ಪ್ರಕಾರ ಚಿತ್ರತಂಡ ಹಮ್ಮಿಕೊಂಡಿ್್ದದ್ದ ಕಾರ್ಯಕ್ರಮಕ್ಕೆ ಆಗಮಿಸಿ ಚಿತ್ರದ ಟ್ರೇಲರ್ ನ್ನು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಆರಂಭದಿಂದಲೂ ನವ ನಿರ್ದೇಶಕ ವಿನಯ್ ಅವರ ನಿರ್ದೇಶನದ ನನ್ನ ಪ್ರಕಾರವನ್ನು ಗಮನಿಸುತ್ತಾ ಬಂದಿದ್ದ ಅವರು ಚಿತ್ರದ ಕ್ರಿಯೇಟಿವಿಟಿ, ಸಿನಿಮಾ ಹುಟ್ಟು ಹಾಕಿರೋ ಕ್ರೇಜ್ ಟ್ರೇಲರ್ ರಿಲೀಸ್ ಮಾಡುವಂತೆ ಮಾಡಿತು ಎಂದಿದ್ದಲ್ಲದೇ ಚಿತ್ರತಂಡಕ್ಕೆ ಸದಾ ನೆರವಾಗುವ ಭರವಸೆಯನ್ನೂ ಕೊಟ್ಟಿದ್ದಾರೆ.
ಕಿಶೋರ್ ಹಾಗೂ ಪ್ರಿಯಾಮಣಿ ಕಾಂಬಿನೇಷನ್ನಿನಲ್ಲಿ ಮೂಡಿಬಂದಿರೋ ನನ್ನ ಪ್ರಕಾರದಲ್ಲಿ ವಿಸ್ಮಯ ಎಂಬ ವಿಶೇಷ ಪಾತ್ರದಲ್ಲಿ ಲೀಲಾ ಮಯೂರಿ ಸಹ ಅಭಿನಯಿಸಿದ್ದಾರೆ. ಕೊಲೆಯೊಂದರ ಸುತ್ತ ಹೆಣೆದಿರುವ ಇದರ ಕಥಾ ಹಂದರ ಹಂತ ಹಂತವಾಗಿ ಕೌತುಕತೆಯನ್ನು ಉಳಿಸಿಕೊಂಡು ಪ್ರೇಕ್ಷಕರಿಗೆ ನಿರೀಕ್ಷೆಗೂ ಮೀರಿದ ಮನರಂಜನೆ ನೀಡುತ್ತದೆ ಎಂಬ ಭರವಸೆಯಲ್ಲಿ ಚಿತ್ರತಂಡವಿದೆ.











































