ಒಂದು ಸೋಲು, ಮತ್ತೊಂದು, ಮಗದೊಂದು ಅಂಥಾ ಒಂದಾದಮೇಲೊಂದು ಸೋಲುಗಳು ಬಾಚಿ ಬಾಚಿ ತಬ್ಬಿಕೊಳ್ಳುತ್ತಲೇ ಇತ್ತು. “ಈ ಹುಡುಗನ ಫಿಸಿಕ್ಕು, ಆ್ಯಕ್ಟಿಂಗು ಎಲ್ಲಾ ಚನ್ನಾಗೇ ಇದೆ. ಆದರೆ ಯಾಕೋ ಲಕ್ಕು ಕುದುರುತ್ತಲೇ ಇಲ್ಲ” ಎಂದು ಜನ ಮಾತಾಡಿಕೊಳ್ಳಲು ಶುರು ಮಾಡಿದ್ದರು. ಡೈರೆಕ್ಟರ್ಸ್ ಸ್ಪೆಷಲ್, ರಾಟೆ, ಜೆಸ್ಸಿ, ಬಾಕ್ಸರ್, ಅಲ್ಲಮ… ಹೀಗೆ ಧನಂಜಯನ ಪಾಲಿಗೆ ಸಿಕ್ಕಿದ್ದು ದೊಡ್ಡ ಬ್ಯಾನರುಗಳು, ಹೆಸರಾಂತ ನಿರ್ದೇಶಕರುಗಳೇ. ಆದರೆ ಒಬ್ಬೊಬ್ಬ ಡೈರೆಕ್ಟರುಗಳೂ ಧನಂಜಯ್ ತಲೆಮೇಲೆ ಮೊಟಕಿ ನೆಲಕ್ಕೆ ಅದುಮಿದರೇ ಹೊರತು ಯಾರೂ ಈತನ ವೃತ್ತಿ ಬದುಕಿಗೆ ವರವಾಗುವಂಥ ಒಂದೇ ಒಂದು ಪಾತ್ರವನ್ನಾಗಲಿ, ಸಿನಿಮಾವನ್ನಾಗಲಿ ಮಾಡಲೇ ಇಲ್ಲ. ಈಗ ಗೆಲ್ಲಬಹುದು, ಆಗ ಗೆಲ್ಲಬಹುದು ಅಂಥಾ ಕಾಯುತ್ತಿದ್ದ ಧನಂಜ್ ಕೆರಿಯರನ್ನು ಕೈ ಹಿಡಿದು ಮೇಲೆತ್ತಿದ್ದು ಸೂರಿ!

ಅದು ಸೂರಿಯ ತಾಕತ್ತು. ಯಾರನ್ನು ಹೇಗೆ ತೋರಿಸಬಹುದು ಅನ್ನೋ ಕರಾರುವಕ್ಕಾದ ದೃಷ್ಟಿಯಿರುವ ಡೈರೆಕ್ಟರೀತ. ಹೀರೋ ಆಗಿ ಅಲ್ಲೀತನಕ ತಲೆಯೆತ್ತದೇ ಒದ್ದಾಡುತ್ತಿದ್ದ ಧನಂಜಯ `ಟಗರು’ ಅನ್ನೋ ಸಿನಿಮಾ ರಿಲೀಸಾಗಿ ಒಂದು ಶೋ ಮುಗಿಯೋ ಹೊತ್ತಿಗೆಲ್ಲಾ `ಡಾಲಿ’ಯಾಗಿ ಮಾರ್ಪಟ್ಟಿದ್ದ. ಅಲ್ಲೀತನಕದ ನೋವು, ಅಪಮಾನಗಳೆಲ್ಲಾ, ಇನ್ನೂ ಗೆಲ್ಲಲು ಆಗಲಿಲ್ಲವಲ್ಲಾ ಅನ್ನೋ ಕೊರಗೆಲ್ಲಾ ಒಂದೇ ಏಟಿಗೆ ಎಗರಿಬಿದ್ದಿತ್ತು. ಶಿವಣ್ಣನಂಥಾ ಶಿವಣ್ಣನ ಮುಂದೆ ಧನಂಜಯ ಡಾಲಿಯಾಗಿ ಅಬ್ಬರಿಸಿದ್ದ.

ಅದು ನೆಗೆಟೀವ್ ರೋಲ್ ಆಗಿದ್ದರೂ ಜನ ಇಷ್ಟಪಟ್ಟರು. ಅದಾದ ನಂತರ ಯಜಮಾನ ಸಿನಿಮಾದಲ್ಲಿ ಪಟ್ಟಾಸು ಸಿಡಿಸಿದ ಮಿಠಾಯಿ ಸೂರಿ ಧನಂಜಯನನ್ನು ಮತ್ತೊಂದು ಎತ್ತರಕ್ಕೆ ಕರೆದುಕೊಂಡು ಹೋಗಿದೆ. ಈ ಮಧ್ಯೆ ಅದೇ ಸೂರಿ ಪಾಪ್ ಕಾರ್ನ್ ಮಂಕಿ ಟೈಗರ್ ಅನ್ನುವ ವಿಚಿತ್ರ ಹೆಸರಿನ ಸಿನಿಮಾದಲ್ಲಿ ಧನಂಜಯನನ್ನು ಹೀರೋ ಮಾಡುತ್ತಿದ್ದಾರೆ. ಇವತ್ತು ಡಾಲಿಯ ಪಾಲಿಗೆ ಸಾಲು ಸಾಲು ಅವಕಾಶಗಳು ಕಾದು ಕುಂತಿವೆ. ಈಗ ಧನಂಜಯ್’ಗೆ ಸಿಕ್ಕ ಸಿಕ್ಕ ಅವಕಾಶಗಳನ್ನೆಲ್ಲಾ ಒಪ್ಪಿಕೊಳ್ಳಲೇಬೇಕೆನ್ನುವ ಉಮೇದೂ ಇಲ್ಲ. ನೆಗೆಟೀವೋ, ಪಾಸಿಟೀವೋ ಒಟ್ಟಿನಲ್ಲಿ ತನಗೊಪ್ಪುವ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು, ಅದರಲ್ಲಿ ನಟಿಸುತ್ತಾ ಹೋದರೆ ಡಾಲಿ ಧನಂಜಯ್ ಬರೀ ಕನ್ನಡ ಮಾತ್ರವಲ್ಲ, ಭಾರತೀಯ ಚಿತ್ರರಂಗದಲ್ಲಿ ದೊಡ್ಡ ನಟನಾಗಿ ನಿಲ್ಲುವ ಎಲ್ಲ ಸಾಧ್ಯತೆಗಳೂ ಇವೆ.











































