ಆಟಕ್ಕೂ ಇದೆ ಲೆಕ್ಕಕ್ಕೂ ಇದೆ ಈ ಟ್ರೇಲರ್!

Picture of Cinibuzz

Cinibuzz

Bureau Report

ಯುವ ನಿರ್ದೇಶಕ ರಾಮ್. ಜೆ. ಚಂದ್ರ ವೃತ್ತಿಯಲ್ಲಿ ಐಟಿ ಉದ್ಯೋಗಿ. ಸಿನಿಮಾ ನಿರ್ದೇಶನದ ಮೇಲಿನ ಮೋಹದಿಂದ ತಮ್ಮ ಬಿಡುವಿನ ಸಮಯದಲ್ಲಿ ನಿರ್ದೇಶಿಸಿರುವ ಸಿನಿಮಾ ’ಆಟಕ್ಕುಂಟು ಲೆಕ್ಕಕ್ಕಿಲ್ಲ’. ಆದರೆ ಬಿಡುಗಡೆಯಾಗಿರುವ ಈ ಚಿತ್ರದ ಟ್ರೇಲರನ್ನು ನೋಡಿದರೆ, ಯಾರೋ ಹತ್ತಾರು ಸಿನಿಮಾಗಳನ್ನು ಮಾಡಿರುವ ಅನುಭವೀ ನಿರ್ದೇಶಕ ರೂಪಿಸಿರುವ ಸಿನಿಮಾ ಇದು ಎನ್ನುವಷ್ಟರ ಮಟ್ಟಿಗೆ ಗುಣಮಟ್ಟ ಹೊಂದಿದೆ.

ರಾಮ್. ಜೆ. ಚಂದ್ರ ಈ ಚಿತ್ರಕ್ಕೆ ಕತೆ, ಚಿತ್ರಕಥೆ ಬರೆದು ನಿರ್ದೇಶಿಸುವುದರ ಜೊತೆಗೆ ವಸುಂಧರ ಕ್ರಿತಿಕ್ ಫಿಲಂಸ್ ಮೂಲಕ ಚಿತ್ರವನ್ನು ನಿರ್ಮಾಣ ಕೂಡ ಮಾಡಿದ್ದಾರೆ. ಸಂಚಾರಿ ವಿಜಯ್, ಮಯೂರಿ, ದುನಿಯಾ ರಶ್ಮಿ ಮತ್ತು ಅಚ್ಯುತ್ ಕುಮಾರ್ ಈ ಚಿತ್ರದ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. “ಯಾವುದೇ ಸಿನಿಮಾದ ಲಕ್ಷಣಗಳು, ಅದರಲ್ಲಿರುವ ಪದರಗಳನ್ನು ತಿಳಿದುಕೊಳ್ಳಬೇಕಾದರೆ ಚಿತ್ರಮಂದಿರಕ್ಕೆ ಬರಬೇಕು. ಚಿತ್ರದ ಪ್ರತಿಯೊಂದು ದೃಶ್ಯ ಪ್ರೇಕ್ಷಕನಿಗೆ ಹೊಂದಿಕೊಳ್ಳುವಂತೆ ಭಾಸವಾಗುತ್ತದೆ. ಈ ಚಿತ್ರದಲ್ಲಿ ಎರಡು ಪ್ರತ್ಯೇಕ ಕತೆಗಳನ್ನು ಹೇಳುವ ಪ್ರಯತ್ನ ಮಾಡಲಾಗಿದ್ದು, ಎರಡೂ ಕಥೆಗಳಿಗೆ ಕ್ಲೈಮ್ಯಾಕ್ಸ್‌ನಲ್ಲಿ ಮೆಸೇಜ್ ಇದೆ, ಚಿತ್ರದ ಶೀರ್ಷಿಕೆ ಈ ರೀತಿ ಇದ್ದರೂ, ಚಿತ್ರ ಮಾತ್ರ ಆಟಕ್ಕೂ ಇದೆ, ಲೆಕ್ಕಕ್ಕೂ ಇದೆ” ಅನ್ನೋದು ನಟ ಸಂಚಾರಿ ವಿಜಯ್ ಅನಿಸಿಕೆ.

“ಟ್ರೇಲರಿನಲ್ಲಿ ತೋರಿಸಿರುವ ದೃಷ್ಯಗಳು ಕೇವಲ ಚಿತ್ರದ ಸ್ಯಾಂಪಲ್ ಅಷ್ಟೇ. ಬಾಕಿ ತೊಂಬತ್ತೂಂಬತ್ತರಷ್ಟು ಸನ್ನಿವೇಶಗಳು ಅರ್ಥವಾಗಬೇಕಾದರೆ ಚಿತ್ರ ನೋಡಬೇಕು. ಈ ಚಿತ್ರ ನೋಡುಗರಿಗೆ ಹೊಸ ಅನುಭವ ನೀಡುತ್ತದೆ” ಎಂದು ನಾಯಕಿ ದುನಿಯಾ ರಶ್ಮಿ ಹೇಳಿದ್ದಾರೆ. “ನಾನೇ ಪುಟ್ಟ ಹುಡುಗಿ, ನನಗೊಂದು ಮುದ್ದಿನ ಮಗಳನ್ನು ಕೊಟ್ಟು ಗೃಹಿಣಿಯಾಗಿ ತೋರಿಸಿದ್ದಾರೆ. ನಾನು ಈ ವರೆಗೂ ಯಾವ ಚಿತ್ರದಲ್ಲೂ ಮಾಡದ ಪಾತ್ರ ಮತ್ತು ನಟನೆಯನ್ನು ಈ ಚಿತ್ರದಲ್ಲಿ ಮಾಡಿದ್ದೇನೆ. ಈ ಸಿನಿಮಾ ಚಿತ್ರರಂಗದಲ್ಲಿ ಹೊಸ ದಾಖಲೆ ನಿರ್ಮಿಸೋದು ಗ್ಯಾರೆಂಟಿ” ಅನ್ನೋದು ನಟಿ ಮಯೂರಿ ಮಾತು. ವಾಸುಕಿ ವೈಭವ್ ಚಿತ್ರದ ಎರಡು ಗೀತೆಗಳಿಗೆ ಸಾಹಿತ್ಯ ರಚಿಸಿ ಒಂದು ಹಾಡನ್ನು ಹಾಡಿದ್ದಾರೆ. ನೋಬಿನ್ ಪೌಲ್ ಸಂಗೀತ ನೀಡಿದ್ದಾರೆ.
ಇಷ್ಟರಲ್ಲೇ ತೆರೆಗೆ ಬರುವ ಆಟಕ್ಕುಂಟು ಲೆಕ್ಕಕ್ಕಿಲ್ಲ ಸಿನಿಮಾದ ಟ್ರೇಲರು ಸಾಕಷ್ಟು ಕುತೂಹಲ ಹುಟ್ಟಿಸಿದೆ. ಸಿನಿಮಾ ಕೂಡಾ ಅದೇ ಮಟ್ಟಕ್ಕೆ ರೂಪುಗೊಂಡಿದ್ದರೆ ಜನ ಸ್ವೀಕರಿಸೋದಂತೂ ಸತ್ಯ!

ಇನ್ನಷ್ಟು ಓದಿರಿ

Scroll to Top