ಮೂವರಲ್ಲಿ ಅವಳು ಯಾರಿಗೆ?

Picture of Cinibuzz

Cinibuzz

Bureau Report

ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಇನ್ನೆಲ್ಲೋ ಬಂದು ಒಂದಾದ ಮೂವರು ಸ್ನೇಹಿತರು. ಒಬ್ಬೊಬ್ಬರದ್ದೂ ಒಂದೊಂದು ಹಿನ್ನೆಲೆ. ಒಬ್ಬ ಅಭಿ, ಇನ್ನೊಬ್ಬ ರಾಮ್ ಮತ್ತೊಬ್ಬ ಚಂದ್ರ. ಅಭಿಗೆ ಬಿಟ್ಟು ಬಂದ ಊರಿನ  ಬಾಲ್ಯದ ಗೆಳತಿಯ ನೆನಪು. ರಾಮ್ ತನ್ನದೇ ಊರಿನ ಡಾಕ್ಟರ್ ಮಗಳನ್ನು ಪ್ರೀತಿಸುತ್ತಿರುತ್ತಾನೆ. ಚಂದ್ರ  ಆನ್ ಲೈನಲ್ಲಿ ಪಬ್ಜಿ ಆಡುವ ಜೊತೆಗಾತಿಯ ಮುಖ ನೋಡದೇನೆ ಲವ್ವಿಗೆ ಬಿದ್ದಿರುತ್ತಾನೆ. ಈ ಮೂವರೂ ಅದೊಂದು ದಿನ ಮದುವೆ ಸಮಾರಂಭಕ್ಕೆಂದು ಪ್ರವಾಸ ಹೋಗುತ್ತಾರೆ. ಆ ನಂತರ ನಡೆಯುವ ಘಟನಾವಳಿಗಳೇ ನಿಜಕ್ಕೂ ಕುತೂಹಲ ಹುಟ್ಟಿಸೋದು‌. ಅಲ್ಲಿಂದಲೇ ಸಿನಿಮಾ ಶುರುವಾಗೋದು!

ಚಿತ್ರದ ಮೊದಲ ಭಾಗ ನಾಟಕ, ಹೊಟೇಲು, ಕ್ಯಾಬು ಅಂತಾ ಅನಗತ್ಯವಾಗಿ ಎಳೆದಾಡುತ್ತದೆ. ದ್ವಿತೀಯಾರ್ಧದಲ್ಲಿ ಕತೆಯ ಜರ್ನಿ ಟ್ರ್ಯಾಕಿಗೆ ಬಂದು ಕೂರುತ್ತೆ. ನಾಟ್ಯರಂಗ ಯಾವ ಪಾತ್ರ ಕೊಟ್ಟರೂ ತನ್ಮಯರಾಗಿ ನಟಿಸುತ್ತಾರೆ ಅನ್ನಿಸಿಕೊಳ್ಳಲು ಈ ಚಿತ್ರವೂ ಒದಾಹರಣೆ ಲಿಸ್ಟಿಗೆ ಸೇರಿದೆ. ಸಿದ್ದು ಮೂಲಿಮನಿ ಕೂಡ ಇಷ್ಟವಾಗುತ್ತಾರೆ. ಚೇತನ್ ದುರ್ಗ ಅವರನ್ನು ಇನ್ನಷ್ಟು ಬಳಸಿಕೊಳ್ಳಬಹುದಿತ್ತು. ನಾಯಕಿ ಶಿವಾನಿ ರೈ ನೋಡಲಷ್ಟೇ ಅಲ್ಲ, ನಟನೆಯಲ್ಲೂ ಚೆಂದ. ಈ ಹುಡುಗಿ ಕನ್ನಡ ಚಿತ್ರರಂಗದಲ್ಲಿ ಎದ್ದು ನಿಲ್ಲುವ ಎಲ್ಲ ಲಕ್ಷಣ ಹೊಂದಿದ್ದಾರೆ.

ನಿರ್ದೇಶಕ ನಾಗೇಂದ್ರ ಗಾಣಿಗ ಅವರಿಗೆ ಲವ್‌ ಸಬ್ಜೆಕ್ಟನ್ನು ಹ್ಯಾಂಡಲ್‌ ಮಾಡುವ ಕೆಪ್ಯಾಸಿಟಿ ಇದೆ ಅನ್ನೋದು ಈ ಸಿನಿಮಾದಲ್ಲಿ ಗೊತ್ತಾಗಿದೆ. ಇದು ತ್ರಿಕೋನ ಪ್ರೇಮಕತೆಯಾ ಎನ್ನುವ ಅನುಮಾನ ಮೂಡಿಸುತ್ತಲೇ ನಿರೀಕ್ಷಿಸಲಾಗದ ತಿರುವುಗಳನ್ನು ನೀಡಿರೋದು ಅವರ ಬುದ್ದಿವಂತಿಕೆ ಅಂದುಕೊಳ್ಳಬಹುದು. ಮೊದಲ ಭಾಗದ ಬಗ್ಗೆ ಹೆಚ್ಚು ಗಮನ ಕೊಟ್ಟಿದ್ದಿದ್ದರೆ ಅಭಿರಾಮಚಂದ್ರ ಒಂದೊಳ್ಳೆ ಸಿನಿಮಾ ಆಗಿ ದಾಖಲಾಗುತ್ತಿತ್ತು.

ಇನ್ನಷ್ಟು ಓದಿರಿ

Scroll to Top