ANAND_AUDIO_SUCCESS_STORY

Picture of Cinibuzz

Cinibuzz

Bureau Report

ನೀತಿ, ನಿಯತ್ತು, ಪ್ರಾಮಾಣಿಕತೆ ಇದ್ದರೆ ಯಾವುದೇ ಕ್ಷೇತ್ರವಿರಲಿ, ವ್ಯಾಪಾರವಾಗಲಿ ಯಶಸ್ಸು ಬಾಚಿ ತಬ್ಬುತ್ತದೆ ಅನ್ನೋದಕ್ಕೆ ಉದಾಹರಣೆಯಂತೆ ನಿಂತಿರುವ ಸಂಸ್ಥೆ ಆನಂದ್ ಆಡಿಯೋ!

ಕನ್ನಡ ಚಿತ್ರರಂಗದ ಮಟ್ಟಿಗೆ ಆಡಿಯೋ ಹಕ್ಕುಗಳನ್ನು ಪಡೆಯಲು ಹತ್ತು ಹಲವು ಚಾನೆಲ್ಲುಗಳಿವೆ. ಒಬ್ಬೊಬ್ಬರದ್ದೂ ಒಂದೊಂದು ಬಗೆಯ ವ್ಯಾಪಾರೀ ಸೂತ್ರಗಳು. ಯಾರ ಪಾಲಿಸಿ ಏನೇ ಇರಲಿ, ಆನಂದ್ ಆಡಿಯೋ ಮುಂಚೂಣಿ ಸ್ಥಾನದಲ್ಲಿ ನಿಂತಿದೆ. `ಆನಂದ್ ಆಡಿಯೋ ಆಡಿಯೋ ರೈಟ್ಸ್ ತೆಗೆದುಕೊಂಡಿದೆ’ ಅನ್ನೋದೇ ಸ್ಯಾಂಡಲ್ವುಡ್ ಸಿನಿಮಾಗಳಿಗೆ ಪ್ರತಿಷ್ಟೆ ಎನ್ನುವಷ್ಟರ ಮಟ್ಟಿಗೆ ಸಂಸ್ಥೆ ಬ್ರಾಂಡ್ ಉಳಿಸಿಕೊಂಡಿದೆ. ಆನಂದ್ ಆಡಿಯೋದವರು ಗುಣಮಟ್ಟದ ಹಾಡುಗಳಿರುವ ಸಿನಿಮಾಗಳನ್ನು ಮಾತ್ರ ಒಪ್ಪಿಕೊಳ್ಳುತ್ತಾರೆ. ಅದಕ್ಕೆ ತಕ್ಕ ಬೆಲೆಯನ್ನೂ ನಿಗದಿ ಮಾಡುತ್ತಾರೆ. ಯಾವುದೇ ಕಾರಣಕ್ಕೂ ʻಫಾಲ್ಸ್ ಕಮಿಟ್ಮೆಂಟ್ʼ ಅನ್ನೋದು ಈ ಕಂಪೆನಿಯ ಹಿಸ್ಟರಿಯಲ್ಲೇ ಇಲ್ಲ. ಅಷ್ಟು ಕೊಡ್ತೀವಿ ಅಂತಾ ಮಾತು ಕೊಟ್ಟು, ಇಷ್ಟೇ ಇಷ್ಟು ಕೊಟ್ಟು ಕೈತೊಳೆದುಕೊಳ್ಳುವುದಾಗಲಿ, ʻಅಯ್ಯೋ ನಿಮ್ಮ ಸಿನಿಮಾದ ಹಕ್ಕು ಪಡೆದುಕೊಂಡು ನಷ್ಟವಾಯ್ತುʼ ಅಂಥಾ ವರಾತ ತೆಗೆದು, ಒಪ್ಪಿಕೊಂಡ ಹಣಕ್ಕೆ ಧೋಕಾ ಕೊಡೋದಾಗಲಿ ಮಾಡುವುದಿಲ್ಲ. ಮಾತಿನಷ್ಟೇ ವ್ಯವಹಾರವೂ ಖುಲ್ಲಂಖುಲ್ಲಾ!

ಮೋಹನ್ ಛಾಬ್ರಿಯಾ ಅವರು ೧೯೯೯ರಲ್ಲಿ ಆರಂಭಿಸಿದ ಆನಂದ್ ಆಡಿಯೋ ಈಗ ಬರೋಬ್ಬರಿ ಇಪ್ಪತ್ತೈದು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ಮೋಹನ್ ಅವರು ಅಷ್ಟು ಶಿಸ್ತಿನಿಂದ ಕಟ್ಟಿ ನಿಲ್ಲಿಸಿದ ಇಷ್ಟು ದೊಡ್ಡ ಸಂಸ್ಥೆ ಅವರ ನಿಧನದ ನಂತರವೂ ಅವರ ದಾರಿಯಲ್ಲೇ ನಡೆದುಕೊಂಡು ಬಂದಿದೆ; ಪ್ರತಿಫಲವಾಗಿ ನೂರಾರು ಹಿಟ್ ಸಿನಿಮಾಗಳ ಆಡಿಯೋ ಹಕ್ಕನ್ನು ತನ್ನದಾಗಿಸಿಕೊಂಡಿದೆ. ಹೊಸ ಸಂಗೀತ ನಿರ್ದೇಶಕರನ್ನು ಪ್ರೋತ್ಸಾಹಿಸಿದೆ. ಪ್ರತಿಭೆ, ಕ್ರಿಯಾಶೀಲತೆಯನ್ನೇ ಮಾನದಂಡವನ್ನಾಗಿ ಇರಿಸಿಕೊಂಡಿರುವುದರಿಂದಲೇ ಬಹುಶಃ ಹೊಸ ಸಂಗೀತ ನಿರ್ದೇಶಕರು ರೂಪಿಸಿದ ಹಾಡುಗಳು ಆನಂದ್ ಆಡಿಯೋದಲ್ಲಿ ಸೂಪರ್ ಹಿಟ್ ಅನ್ನಿಸಿಕೊಂಡಿರುವುದು.

ʻ2023-24ರ ಮೆಗಾ ಹಿಟ್ ಹಾಡುಗಳು ಎಲ್ಲಿ ರಿಲೀಸ್ ಆಗಿವೆ?ʼ ಅಂತಾ ಹುಡುಕಿ ನೋಡಿದರೆ ನಿಮಗೇ ಗೊತ್ತಾಗಿಬಿಡುತ್ತದೆ. ಆನಂದ್ ಆಡಿಯೋ ಹಕ್ಕು ಪಡೆದುಕೊಂಡ ಕಾಟೇರ, ಕೃಷ್ಣಂ ಪ್ರಣಯ ಸಖಿ, ಭೀಮ, ಕರಟಕ ದಮನಕ, ಭೈರತಿ ರಣಗಲ್‌ ಮುಂತಾದ ಸಿನಿಮಾಗಳ ಸೂಪರ್ ಹಿಟ್ ಸಾಂಗುಗಳೆಲ್ಲಾ ಆನಂದ್ ಆಡಿಯೋ ಎನ್ನುವ ಸಂಸ್ಥೆಯ ಲೇಬಲ್ ಅಂಟಿಸಿಕೊಂಡವೇ ಆಗಿವೆ.

ಮೋಹನ್ ಛಾಬ್ರಿಯಾ ಅವರ ಸಹೋದರ ಶ್ಯಾಮ್ ಛಾಬ್ರಿಯಾ ಮತ್ತು ಮೋಹನ್ ಅವರ ಪುತ್ರ ಆನಂದ್ ಅವರ ಶ್ರಮ ಮತ್ತು ವ್ಯಾವಹಾರಿಕ ಚತುರತೆ, ಗುಣಮಟ್ಟದ ಹಾಡುಗಳನ್ನು ಹೆಕ್ಕುವ ಬುದ್ದಿವಂತಿಕೆಯಿಂದಲೇ ಬಹುಶಃ ಇಷ್ಟು ದೊಡ್ಡ ಮಟ್ಟದ ಗೆಲುವು ಇವರಿಗೆ ಪ್ರಾಪ್ತಿಯಾಗಿದೆ. 2025ಕ್ಕೆ ಬರಲಿರುವ ಅರ್ಜುನ್ ಜನ್ಯ ನಿರ್ದೇಶನದ 45, ಪ್ರೇಮ್ಸ್‌ ನಿರ್ದೇಶನದಲ್ಲಿ ಧ್ರುವಾ ಸರ್ಜಾ ನಟಿಸಿರುವ KD, ಸಂಜು ವೆಡ್ಸ್‌ ಗೀತಾ ಸೇರಿದಂತೆ ಸಾಕಷ್ಟು ಸಿನಿಮಾಗಳ ಹಾಡುಗಳನ್ನು ಆನಂದ್ ಆಡಿಯೋ ದೊಡ್ಡ ಮೊತ್ತ ಕೊಟ್ಟು ಖರೀದಿಸಿದೆ.

ಎಷ್ಟೇ ಬೆಳೆದರೂ, ಕನ್ನಡ ಸಿನಿಮಾ, ಭಾವಗೀತೆಗಳಿಗಷ್ಟೇ ಮೀಸಲಾಗಿದೆ. ಬರೋಬ್ಬರಿ ಹದಿಮೂರು ಮಿಲಿಯನ್‌ ಸಬ್‌ಸ್ಕ್ರೈಬರ್‌ (Subscribers) ಗಳನ್ನು ಆನಂದ್‌ ಆಡಿಯೋ ಯೂಟ್ಯೂಬ್‌ ಹೊಂದಿದೆ.

2025ರ ಅತಿನಿರೀಕ್ಷಿತ ಪಟ್ಟಿಯಲ್ಲಿರುವ ಬಹುತೇಕ ಚಿತ್ರಗಳ ಆಡಿಯೋ ರೈಟ್ಸ್‌ ಪಡೆದಿರುವ ಆನಂದ್‌ ಆಡಿಯೋ ಹೊಸ ವರ್ಷಕ್ಕೆ ಇನ್ನಷ್ಟು ಗೆಲುವುಗಳನ್ನು ಮುಡಿಗೇರಿಸಿಕೊಳ್ಳಲಿ. ಸ್ಯಾಂಡಲ್‌ವುಡ್‌ ಪೂರ್ತಿ ʻಆನಂದʼಮಯವಾಗಲಿ!

ಇನ್ನಷ್ಟು ಓದಿರಿ

Scroll to Top