ಗಂಡಸರಿಗೂ ಮಕ್ಕಳಾಗುವ ಕಾಲವಿದು!

Picture of Cinibuzz

Cinibuzz

Bureau Report

ಗಂಡು ಗರ್ಭ ಧರಿಸಿದರೆ ಏನಾಗಬಹುದು..?

ಹೆಣ್ಣು ಗರ್ಭ ಧರಿಸುವುದು ಪ್ರಕೃತಿ ನಿಯಮ. ಅಸಹಜ ಪ್ರಕರಣವೊಂದರಲ್ಲಿ ಗಂಡು ಗರ್ಭ ಧರಿಸಿದರೆ ಏನಾಗಬಹುದು..? ಸೀರೆಯಲ್ಲಿ ತುಂಬು ಗರ್ಭಿಣಿಯನ್ನು ಊಹಿಸಿದಂತೆ ಪ್ಯಾಂಟ್ ಶರ್ಟ್ ಧರಿಸಿದ ಗಂಡಸು ಗರ್ಭ ಧರಿಸಿದರೆ ಹೇಗಿರುತ್ತದೆ? ಅಂದುಕೊಳ್ಳೋದೇ ವಿಲಕ್ಷಣ ಅಲ್ಲವಾ? ಪಾಪಿ ಕಲಿಗಾಲ ಕೆಟ್ಟೋಯ್ತಯ್ಯ.. ಹೆಣ್ಣು ಹೆಣ್ಣ ಮದುವೆಯಾಗೋ ಮೋಹ ಬಂತಯ್ಯ.. ಗಂಡಸರಿಗೆ ಮಕ್ಕಳಾಗೊ ಕಾಲ ಬಂತಯ್ಯ ಇದು ಸಾಮಾನ್ಯವಾಗಿ ಎನ್ನುವ ಹಾಡನ್ನು ಕೇಳಿರುತ್ತೀರಿ. ಈ ಹಾಡಿನ ಸಾಲಿಗೆ ಅನ್ವರ್ಥದಂತೆ ಮೂಡಿಬಂದಿರುವ LG BT Q ಕಥೆಯನ್ನಾಧರಿಸಿದ ಸಿನಿಮಾ ನಿಮಗೊಂದು ಸಿಹಿಸುದ್ದಿ!


ಪರಭಾಷೆ ಸಿನಿಮಾದಲ್ಲಿ ಗಂಡಸು ಗರ್ಭ ಧರಿಸಿದಂತಹ ಸಿನಿಮಾಗಳು ಬಂದಿವೆ. ಇದೀಗ ಕನ್ನಡದಲ್ಲಿ ಮೊಟ್ಟ ಮೊದಲ ಬಾರಿಗೆ ಗರ್ಭ ಧರಿಸಿದ ಗಂಡಸಿನ ತೆರೆ ಮೇಲೆ ಅನಾವರಣಗೊಂಡಿದೆ. ಹೆಣ್ಣು ಗರ್ಭಧರಿಸಿದಾಗ ಪರೀಕ್ಷೆ ನಡೆಸೋ ವೈದ್ಯರು ʻಎ ಸ್ವೀಟ್ ನ್ಯೂಸ್ ಫಾರ್ ಯೂʼ ಅನ್ನೋದು ಸಾಮಾನ್ಯ. ಆ ನಂತರ ಎಲ್ಲರೂ ಸಿಹಿ ಹಂಚುತ್ತಾರೆ. ಅದೇ ಒಬ್ಬ ಪುರುಷನನ್ನು ಪರೀಕ್ಷೆಗೆ ಒಳಪಡಿಸಿದ ನಂತರ ʻನಿಮಗೊಂದು ಸಿಹಿ ಸುದ್ದಿʼ ಎಂದರೆ ಪ್ರತಿಕ್ರಿಯೆ ಹೇಗಿರಬಹುದು..? ಕ್ಷಣವೊಮ್ಮೆ ಬ್ಲಾಂಕ್ ಆಗಬಹುದೇನೋ.. ಗಂಡಸು ಗರ್ಭ ಧರಿಸುತ್ತಾನೆ ಎಂಬುದು ಈ ಜಮಾನದಲ್ಲೂ ವಿಚಿತ್ರ ಅನ್ನಿಸೋ ವಿಚಾರ. ಇಂತಹದೊಂದು ವಿಚಿತ್ರದ ಕಥೆಯನ್ನು ಅಷ್ಟೇ ಕುತೂಹಲಕಾರಿಯಾಗಿ ಪೋಣಿಸಿದ್ದಾರೆ. ಅನೇಕ ತಮಾಷೆ ಪ್ರಸಂಗಗಳ ಮೂಲಕ ಕಥೆಯನ್ನು ನಿರೂಪಿಸಿದ್ದರೂ, ಗಟ್ಟುಯಾದ ಕಂಟೆಂಟು ಮತ್ತು ಕಾಡುವ ಅಂಶಗಳು ಸಹಾ ಈ ಚಿತ್ರದಲ್ಲಿವೆ.


ಅರ್ಜುನ್ ಮತ್ತು ಡಿಡಿ ಎಂಬಿಬ್ಬರು ಫ್ರೆಂಡ್ಸ್. ಅದರಲ್ಲಿ ಅರ್ಜುನ್ ಸೆಲೆಬ್ರಿಟಿ ಬಾಣಸಿಗರಾಗಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಅದೊಂದು ದಿನ ಅರ್ಜುನ್ ಗರ್ಭ ಧರಿಸುತ್ತಾನೆ. ಈ ಯುವಕ ಗರ್ಭ ಧರಿಸಿದ್ದು ಹೇಗೆ? ಹಿಂದಿನ ತಿಂಗಳಲ್ಲಿ ಏನೇನು ವಿಚಾರಗಳು ಘಟಿಸಿರುತ್ತವೆ? ಈ ನಡುವೆ ಗರ್ಭ ಧರಿಸಿದ ಹುಡುಗನ ಪ್ರಿಯತಮೆ ಹೇಗೆ ಪ್ರತಿಕ್ರಿಯಿಸುತ್ತಾಳೆ? ಏನೆಲ್ಲಾ ಅವಾಂತರಗಳು ಎದುರಾಗುತ್ತವೆ? ಉದ್ಭವಿಸುವ ಪ್ರತಿಯೊಂದು ಗೊಂದಲಗಳು ಪ್ರೇಕ್ಷಕರನ್ನು ಹೇಗೆ ನಗುವಿನಲ್ಲಿ ಮುಳುಗಿಸುತ್ತವೆ. ತಾಂತ್ರಿಕವಾಗಿ ಚಿತ್ರಕ್ಕೆ ಬೇಕಿರುವುದೆಲ್ಲಾ ದಕ್ಕಿದೆ. ಕಲಾವಿದರ ಆಯ್ಕೆ ಕೂಡಾ ಉತ್ತಮವಾಗಿದೆ. ಶೀಲಾ ಆಂಟಿ ಪಾತ್ರದಲ್ಲಿ ನಟಿ ಹರಿಣಿ ಶ್ರೀಕಾಂತ್, ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಸುಜಯ್ ಶಾಸ್ತ್ರಿ, ಶಿಲ್ಪ ಶೈಲೇಶ್ ಪಾತ್ರಗಳು ನಗಿಸುತ್ತವೆ.


ರಂಗಭೂಮಿ ಹಿನ್ನೆಲೆಯ ಹೊಸ ಪ್ರತಿಭೆ ರಘು ಭಟ್ ಗರ್ಭ ಧರಿಸಿದ ಪುರುಷನ ಪಾತ್ರದಲ್ಲಿ ಚೆಂದಗೆ ಅಭಿನಯಿಸಿದ್ದಾರೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಜನ ಪ್ರತಿಯೊಂದರಲ್ಲೂ ಹೊಸತನವನ್ನು ನಿರೀಕ್ಷಿಸುತ್ತಿದ್ದಾರೆ. ಹೊಸತು ಅನ್ನೋ ಪದಕ್ಕೇ ಅನ್ವರ್ಥವಾಗಿರುವ ಆಲೋಚನೆಯೊಂದಿಗೆ ರೂಪುಗೊಂಡಿರುವ ನಿಮಗೊಂದು ಸಿಹಿ ಸುದ್ದಿಯ ಕಥೆಯ ವಿವರವನ್ನು ಹೇಳಿದರೆ ಮಜಾ ಇರೋದಿಲ್ಲ. ತೆರೆ ಮೇಲೆ ನೋಡಿದರಷ್ಟೇ ಅದರ ಖುಷಿ ಪ್ರಾಪ್ತಿಯಾಗಲು ಸಾಧ್ಯ!

ಇನ್ನಷ್ಟು ಓದಿರಿ

Scroll to Top