ಬಾಲಿವುಡ್ ಪಾಲಾದ ಕನ್ನಡ ಸಿನಿಮಾ

Picture of Cinibuzz

Cinibuzz

Bureau Report

ashwatthama movie shahid kapoor shivarajkumar kannada
ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅವರ ಅಭಿನಯದಲ್ಲಿ ಶುರುವಾಗಬೇಕಿದ್ದ ಚಿತ್ರವೊಂದು ಪುರ್ರಂತಾ ಬಾಲಿವುಡ್‌ಗೆ ಹಾರಿ ಹೋಗಿದೆ. ಹೀಗೆ  ಹ್ಯಾಟ್ರಿಕ್‌ ಹೀರೋಗೆ ಕೈ ಕೊಟ್ಟಿರುವುದು ಅಶ್ವತ್ಥಾಮ ಸಿನಿಮಾ. ಬಹುಶಃ ನೀವು ಮರೆತಿದ್ದೀರೋ ಏನೋ? ವರ್ಷಗಳ ಹಿಂದೆ ಅಶ್ವತ್ಥಾಮ  ಹೆಸರಿನ ಚಿತ್ರವೊಂದು ಭಾರೀ ಸದ್ದು ಮಾಡಿತ್ತು. ಆಗ ಪುಷ್ಕರ್‌ ಮಲ್ಲಿಕಾರ್ಜುನ ಸಿಕ್ಕಾಪಟ್ಟೆ ಜೂಮಲ್ಲಿದ್ದರು. ಅವನೇ ಶ್ರೀಮನ್ನಾರಾಯಣ ಬಿಡುಗಡೆಗೆ ಮೊದಲು ಆ ಚಿತ್ರದ ನಿರ್ದೇಶಕ ಸಚಿನ್‌ ಕೂಡಾ ಟಾಪಲ್ಲಿದ್ದರು. ಇವರಿಬ್ಬರೂ ಸೇರಿ ಶಿವಣ್ಣನಿಗಾಗಿ ಅಶ್ವತ್ಥಾಮ ಸಿನಿಮಾ ಶುರು ಮಾಡಿರುವುದಾಗಿ ದಿನಕ್ಕೊಂದು ಸುದ್ದಿ ನಗಾರಿ ಬಾರಿಸುತ್ತಿದ್ದರು. ಹಾಗೆ ನೋಡಿದರೆ, ಈ ಚಿತ್ರದ ಪೋಸ್ಟರ್‌ ಕೂಡಾ ಅನಾವರಣಗೊಂಡಿತ್ತು.  

ಈಗ ಇದ್ದಕ್ಕಿದ್ದಂತೆ ಇದೇ ಅಶ್ವತ್ಥಾಮ ಶಾಹಿದ್ ಕಪೂರ್ ಪಾಲಾಗಿದ್ದಾನೆ. ಈ ಕುರಿತು  ಸ್ವತಃ ಶಾಹಿದ್ ಕಪೂರ್ ಟ್ವೀಟ್ ಮಾಡಿ ‌ಅಫಿಷಿಯಲ್ಲಾಗೇ ಘೋಷಿಸಿಕೊಂಡಿದ್ದಾರೆ. ಇದೇ ಸಮಯಕ್ಕೆ ಸಚಿನ್ ರವಿ ಕೂಡ ʻʻಅಶ್ವತ್ಥಾಮನ ಕುರಿತ ಕತೆ ಹೇಳುವ ನನ್ನ ಪ್ರಾಮಾಣಿಕ ಪ್ರಯತ್ನವನ್ನು ಮುಂದುವರಿಸಿದ್ದೇನೆ. ಉಳಿದಿದ್ದು ಆ ಶ್ರೀಕೃಷ್ಣನಿಗೆ ಬಿಡುತ್ತೇನೆʼʼ ಎಂದಿದ್ದಾರೆ. ಅಚ್ಚರಿ ಎಂದರೆ ಹಿಂದಿಯ ಜೊತೆಗೆ ಕನ್ನಡ, ತೆಲುಗು, ತಮಿಳು, ಮಲಯಾಳಂನಲ್ಲೂ  ಈ ಚಿತ್ರ ರೂಪುಗೊಳ್ಳಲಿದೆ. ಅಲ್ಲಿಗೆ ಸೆಂಚುರಿ ಸ್ಟಾರ್ ಕೈ ಹಿಡಿಯಬೇಕಿದ್ದ ಮಹಾಭಾರತದ ಅಶ್ವತ್ಥಾಮ, ಬಾಲಿವುಡ್ ಬಾಗಿಲಲ್ಲಿ ನಿಂತು ಶಾಹಿದ್ ಕೈ ಕುಲುಕಿದ್ದಾನೆ. ಅಂದಹಾಗೆ ನಿರ್ಮಾಪಕರ ಕುರ್ಚಿಯಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಕೂಡ ಇಲ್ಲ. ಅಲ್ಲಿಗೆ ʻಅವನೇ ಶ್ರೀಮನ್ನಾರಾಯಣʼ ಚಿತ್ರದ ನಂತರ ನಿರ್ದೇಶಕ ಸಚಿನ್ ರವಿ ಕೂಡ ವನವಾಸ ಮುಗಿಸಿದಂತಾಗಿದೆ!!

 

ಇನ್ನಷ್ಟು ಓದಿರಿ

Scroll to Top